Thursday, 9 January 2014

ಹಠ

ನಿನ್ನ ಒಲವಿನ ಸವಿಯ ಸವಿಯುತ್ತಲೇ 
ನಾ ಉಸಿರಾಡುತ್ತಿರುವೆ 
ಆ ಸುಖವ ಅಕ್ಷರಗಳಲ್ಲಿ ವರ್ಣಿಸಲಾಗದೆ 

ಪರಿತಪಿಸುತ್ತಿರುವೆ 
ಆದರೂ ಹಠ ಬಿಡದೇ ನಿನ್ನ ಪ್ರೇಮದ ಪರಿಯ 
ಅಕ್ಷರಗಳಲ್ಲಿ ಪೋಣಿಸುತ್ತಲೇ ಇರುವೆ

Monday, 6 January 2014

ವಿಸ್ಮಯ

ಕನಸು ನನಸಾದಾಗ ಸದ್ದಿಲ್ಲದೇ ನಗುವುದು ಮನವು 
ಬಿರುಕು ಮೂಡಿದಾಗ ಗೊತ್ತಿಲ್ಲದೇ ಸುರಿಯುವುದು ಕಣ್ಣೀರು 
ಕಣ್ಣಿಗೂ ಮನಸಿಗೂ ಎತ್ತನಿಂದೆತ್ತ ಸಂಬಂಧ 
ಭಾವನೆಗಳಿಗೆ ಮನಸು  ಆಸರೆಯಾದರೆ 
ನೋವನ್ನು ಹೊರಹಾಕುವ ಅಸ್ತ್ರ ಕಣ್ಣೀರಲ್ಲವೇ ... 

Friday, 3 January 2014

ಪ್ರೇಮಗೀತೆ

ಭಾವನೆಗಳೇ ಇಲ್ಲದ ಮನದಲ್ಲಿ ಭಾವಗೀತೆಯಂತೆ 
ಹರಿಯುತ್ತ ಬಂದೆ ನೀ ಅಂದು 
ಏನಾದರೂ ಉಡುಗೊರೆ ಕೊಡುವ ಆಸೆಯಿಂದ 

ಬರೆಯುತಿರುವೆ ಪ್ರೇಮಗೀತೆ ನಿನಗಿಂದು

ಈ ಜೀವ ಸಹಿಸದು ನೀ ಒಂದು ಕ್ಷಣ ನೊಂದರು
ಅಪ್ಪಿತಪ್ಪಿ ಒಂದು ಹನಿ ಕಣ್ಣೀರು ಬಂದರೂ
ಮುದ್ದಿನ ಮಾತಾಡದಿದ್ದರೂ ಚಿಂತೆಯಿಲ್ಲ ನನಗೆ
ನಿನ್ನ ಮೌನದ ರೂಪವೇ ಸಾಕು ಅದುವೇ ಎಲ್ಲ ಎನಗೆ

ಒಲವಿನ ಮುತ್ತನು ಸುರಿಸುವೆಯಾ ಎಂದು ಆಸೆಯಾಗಿ
ಮನಸಾರೆ ಬರೆದೆ ಈ ಕವನ ನಿನಗಾಗಿ
ನಿನ್ನ ತುಟಿಯಂಚು ನನ್ನ ಕಣ್ಣರೆಪ್ಪೆಯ ಸೋಕಿ ಜಾರುವ ಮುತ್ತಿಗೂ ಮುನ್ನ
ನನ್ನ ಭಾವನೆಗಳನ್ನೆಲ್ಲ ಕವಿತೆಯಲಿ ಪೋಣಿಸಿ ಮಾಡಿದ
ಮುತ್ತಿನ ಹಾರವನ್ನು ನೀನು ಕೊರಳಿಗೆ ಧರಿಸಿದರೆ ಎಷ್ಟು ಚೆನ್ನ
ನವಿಲೊಂದು ನಕ್ಕಿತಂತೆ ದಡದಲ್ಲಿ 
ನದಿಯಲ್ಲಿ ಅರಳಿದ ನೈದಿಲೆಯ ಅಂದ ಕಂಡು 
ನವಿಲ ಕಂಡ ನೈದಿಲೆ ನಾಚಿ ನಲಿಯಿತಂತೆ 
ಅದರ ಸುಂದರ ಗರಿಗಳ ನೋಡಿ 
ಇವರಿಬ್ಬರ ಭಾವಗಳ ನೋಡಿದ ನಿಸರ್ಗ ಮಾತೆ 
ಮುಗುಳ್ನಗುತ್ತ ಅಂದಳಂತೆ ಮಕ್ಕಳೇ 

ಹೀಗೆ ನಗು ನಗುತ್ತಾ ನೀವು ಬದುಕಿದರೆ
ಸಾರ್ಥಕ ನನ್ನ ಬಾಳು ಎನ್ನುತ್ತದೆ ಈ ಧರೆ

Thursday, 2 January 2014

ಆಸೆ

ಒಲವಿನ ಮುತ್ತನು ಸುರಿಸುವೆಯಾ ಎಂದು ಆಸೆಯಾಗಿ 
ಮನಸಾರೆ ಬರೆದೆ ಈ ಕವನ ನಿನಗಾಗಿ 
ನಿನ್ನ ತುಟಿಯಂಚು ನನ್ನ ಕಣ್ಣರೆಪ್ಪೆಯ ಸೋಕಿ ಜಾರುವ ಮುತ್ತಿಗೂ ಮುನ್ನ 
ನನ್ನ ಭಾವನೆಗಳನ್ನೆಲ್ಲ ಕವಿತೆಯಲಿ ಪೋಣಿಸಿ ಮಾಡಿದ 
ಮುತ್ತಿನ ಹಾರವನ್ನು ನೀನು ಕೊರಳಿಗೆ ಧರಿಸಿದರೆ ಎಷ್ಟು ಚೆನ್ನ 

Tuesday, 31 December 2013

ನವವರ್ಷಕೆ ಸುಸ್ವಾಗತ

ಹೊಸವರ್ಷದ ಹೊಂಗಿರಣ ಬೀಳುವ ಸಮಯ 
ಇಂಪಾದ ನಾದದಂತೆ ಹರಿಯುವ ಗಾಯನವಾಗಲಿ ಈ ಜೀವನ 

ಕಂಡ ಕನಸುಗಳೆಲ್ಲ ನನಸಾಗದಿದ್ದರೆ ನಿರಾಸೆ ಬೇಡ 
ಬಯಸಿದ್ದೆಲ್ಲ ಸಿಕ್ಕಿತೆಂದು ಅಹಂಕಾರ ಬೇಡ 

ಕೊರಗುವ ಮನಸಿಗೆ ಸಂತೈಸುವ ಮನಸಾಗಿ 
ಹತಾಶೆ ತುಂಬಿದ ಮನಸಿಗೆ ಹುರಿದುಂಬಿಸುವ ಮನಸಾಗಿ 

ಸಾಗಿಸೋಣ ಈ ಬಾಳ ಬಂಡಿಯ ನವ ಉತ್ಸಾಹದಿಂದ 
ಹಾರೈಸುತ್ತ ಎಲ್ಲರಿಗೂ ನಿಷ್ಕಲ್ಮಷ ಮನಸಿಂದ 

Sunday, 29 December 2013

ಈ ಜೀವ ಸಹಿಸದು ನೀ ಒಂದು ಕ್ಷಣ ನೊಂದರು 
ಅಪ್ಪಿತಪ್ಪಿ ಒಂದು ಹನಿ ಕಣ್ಣೀರು ಬಂದರೂ 
ಮುದ್ದಿನ ಮಾತಾಡದಿದ್ದರೂ ಚಿಂತೆಯಿಲ್ಲ ನನಗೆ 
ನಿನ್ನ ಮೌನದ ರೂಪವೇ ಸಾಕು ಅದುವೇ ಎಲ್ಲ ಎನಗೆ