Monday, 9 December 2013

ಗಿಡಮರಗಳಿಗೊಂದು ನಮನ

ನಗು ಬಂದರೂ ನಗದೇ 
ಅಳು ಬಂದರೂ ಅಳದೇ
ಮನದ ಭಾವನೆಯನ್ನು ಅದುಮಿಟ್ಟುಕೊಂಡು 
ನಿನ್ನ ಮಗುವನ್ನು ಕಿತ್ತು ಅಲಂಕಾರಕ್ಕೆ, ಹಸಿವಿಗೆ 
ಬಳಸುವಾಗಲೆಲ್ಲ ಮೌನರೋಧನೆಯಲ್ಲೇ 
ಕಾಲ ಕಳೆಯುವ ನಿನ್ನ ಉದಾರ ಮನಸಿಗೆ 
ನನ್ನದೊಂದು ನಮನ ಓ ಗಿಡಮರಗಳೇ

Friday, 6 December 2013

ತುಡಿತ

ನಿನ್ನ ನೆನಪು ಸುಳಿದಾಗಲಿಲ್ಲ ಈ ಹೃದಯದಲ್ಲಿ 
ಮಿಡಿಯುವುದು ಒಂದು ಮನಮೋಹಕ ಮಿಡಿತ 

ಅಂತರಂಗದ ಆಳದಲ್ಲಿ ಎಲ್ಲೋ ಒಂದು ಕೇಳುತಿದೆ 
ನಿನಗಾಗಿ ಚಡಪಡಿಸುತ್ತಿರುವ ನನ್ನ ಮನದ ತುಡಿತ 

ಪ್ರತಿಕ್ಷಣ ಬೇಯುತಿರುವೆ ವಿರಹವೆಂಬ ಬೆಂಕಿಯಲ್ಲಿ  
ಕಾಯುತಿರುವೆ ನಾ ತೇಲಲು ನಿನ್ನ ಸನಿಹವೆಂಬ ತಂಗಾಳಿಯಲ್ಲಿ 

Wednesday, 4 December 2013

ವೇದನೆ

ಮರುಭೂಮಿಯಲ್ಲಿ ಮರಳ ಹೊರತು ಸಿಗುವುದೇ ಹರಳು 
ಸತ್ತ ಮನಸಲಿ ನಿರ್ಭಾವುಕ ಸ್ಥಿತಿ ಬಿಟ್ಟರೆ 
ಚಿಗುರುವುದೇ ಸಂತಸದ ಚಿಲುಮೆ 
ಆಸೆಗಳೆಲ್ಲ ಸತ್ತು ಹೋಗಿ ಮನವೆಂಬ ಹೂವು
ಮತ್ತೆಂದು ಆಕಾರ ತಾಳದ ಕಲ್ಲಂತಾಗಿದೆ
ಶಿಲ್ಪಿ ಬಂದು ಕೆತ್ತಿದರೆ ಸುಂದರ ಶಿಲೆಯಾಗಬಹುದೇನೋ ಆ ಕಲ್ಲು
ಒಡೆದು ಹೋದ ಕನ್ನಡಿಯಂತಾಗಿರುವ ಮನವು ಮಾತ್ರ
ಮತ್ತೆಂದು ಅರಳಲಾಗದು ಸುಂದರ ಹೂವಾಗಿ 

Thursday, 28 November 2013

ವಾಸ್ತವ

ಆಕಾಶದ ಎತ್ತರಕ್ಕೆ ಹಾರಾಡುವ 
ಗಾಳಿಪಟ ಸುಂದರವಾಗಿ ಕಾಣುವುದು 
ಆದರೆ ಎತ್ತರಕ್ಕೆ ಹಾರಿಸಿದ ಕೈಗಳು ಮಾತ್ರ 

ಇಳೆಯೊಳಗೆ ಮರೆಯಾಗುವುದು
ಬದುಕು ಸಹ ಹಾಗೆ ಅಲ್ಲವೇ
ಕೈಹಿಡಿದು ಕಾಪಾಡಿದ ಮನವು
ಮೌನದಲ್ಲೇ ಮುಳುಗುವುದು
ಉಪಕಾರ ಮಾಡಿಸಿಕೊಂಡ ಮನವು
ಹಕ್ಕಿಯಂತೆ ಹಾರಾಡುವುದು 

Sunday, 17 November 2013

ಮಳೆಯಿಂದಾದ ವಿರಹ

ಮಳೆ ಸುರಿಯುವ ಸುಂದರ ಸಂಜೆಯಲಿ 
ನೀನಿಲ್ಲವೆಂದು ಕೊರಗುತಿರುವೆ ನಾ ಈ  ಕ್ಷಣ 
ಏನು ಮಾಡಿದರೂ ಕೇಳುತಿಲ್ಲ ನನ್ನ ಮನ 
ಬೇಡವೆಂದರೂ ಕೆಣಕುತ್ತಿದೆ ನಿನ್ನ ನೆನಪು 
ಆ ಕ್ಷಣ ಕಣ್ಣಲ್ಲಿ ಮೂಡುವುದು ಒಂದು ಹೊಳಪು 
ಮಳೆ ನಿಂತು ಹೋಗಿ ಎಲೆಯಿಂದ ಹನಿ ಉದುರುವ ಒಳಗೆ 
ನೀ ಬರದಿದ್ದರೆ ನನ್ನ ನಯನದಿಂದ ಜಾರುವುದು 
ಕಣ್ಣೀರಿನ ಹನಿ ಓ ಹುಡುಗ  

Sunday, 10 November 2013

ಕವನ

ಬಹಳ ದಿನವಾಯ್ತು ನಿನ್ನ ನೋಡಿ ನಕ್ಕು ನಲಿದಾಡಿ 
ಬೇಕೆಂದರೂ ಹತ್ತಿರ ಬರಲಾರಷ್ಟು ದೂರಾಗಿದ್ದೆ ನಿನ್ನಿಂದ 
ಆದೆಷ್ಟು ಪರದಾಡಿದೆನೋ ನಾ ನಿನ್ನ ಕಾಣದೆ 
ಆಗಲಿದ್ದ ಪ್ರತಿಕ್ಷಣ ಯುಗದಂತೆ ಕಳೆದೆ 
ಅಂತು ಇಂತೂ ನಿನ್ನ ಸನಿಹ ಸುಳಿವ ಕ್ಷಣ ಬಂದಾಗಿದೆ 
ಬಯಸಿದ್ದೆಲ್ಲ ನಿನ್ನಲ್ಲಿ ಬರೆಯುವ ಆಸೆ ಚಿಗುರೊಡೆದಿದೆ 
ಇನ್ನೇನು ಬೇಕು ಹೇಳು ನನಗೆ ಓ ಕವನವೇ
ಬಯಸದೇ ಏನನ್ನೂ ನಾ ನಿನ್ನ ಪಡೆದೆ 
ಬಯಕೆಯ ಹೊಳೆಯೇ ಮನದಲ್ಲಿ ಹರಿಸುತಿರುವೆ 
ಬೇಡಿದರೂ ಸಿಗದಂತ ವರವಿಂದು 
ಬೇಡದೇನೇ ನನಗಿಂದು ಸಿಕ್ಕಿದೆ 
ಧನ್ಯವೋ ಧನ್ಯ ಈ ಜೀವ 
ಸದಾ ಹರಿಯುತಿರಲಿ ಹೀಗೆ ನಿನ್ನ ಒಲವಿನ ಭಾವ