Wednesday, 15 May 2013

ಹಂಬಲ

ಕಾದು ಕಾದು ಸಾಕಾಯಿತು ನನಗೆ 
ಪೂರ್ವದ ದಿನಕರ ಪಶ್ಚಿಮಕ್ಕೆ ಸರಿಯುತ್ತಿದ್ದಾನೆ 
ಆದರೂ ನಿನ್ನ ಸುಳಿವಿಲ್ಲ 

ನೀನೀಗ ನನ್ನ ಬಳಿ ಇದ್ದಿದ್ದರೆ ನಾ ಹೆಣೆದ
ಹಾಡನ್ನು ನಿನ್ನಿಂದ ಹಾಡಿಸಿ ಆ ಇಂಪಾದ ದನಿಯೊಂದಿಗೆ
ಈ ತಂಪಾದ ಮುಸ್ಸಂಜೆಯ ಸವಿಯುತ್ತಿದ್ದೆ

ಈ ಹೃದಯದ ಒಂದು ಪುಟ್ಟ ಆಸೆಯನ್ನೂ
ಈಡೇರಿಸದೇ ಸತಾಯಿಸುತಿರುವೆ ಹೀಗೇಕೆ
ಇನ್ನೂ ಕಾಡುತಿದೆ ನಿನ್ನ ದನಿ ಕೇಳುವ ಹಂಬಲಿಕೆ

ಮುಂಜಾನೆಯಿಂದ ಮುಸ್ಸಂಜೆ ಆದರೂ ನಾ ಕಾಯುವೆ
ಕತ್ತಲಾಗುವ ಮುನ್ನ ಕೇಳಿಸಿಬಿಡು ನಿನ್ನ ದನಿಯೊಮ್ಮೆ
ಮತ್ತೆ ಮೋಸ ಮಾಡದೇ ಹಾರಿಹೋಗಬೇಡ ಓ ನನ್ನ ಕೋಗಿಲೆಯೇ

Tuesday, 14 May 2013

ನಾ ನಿನ್ನ ಸಹಚಾರಿಣಿ


ನನ್ನ ಮನ ಒಂದು ಶಿಲೆಯಂತೆ ಇರಲು

ಅದಕೆ ಭಾವನೆಯ ರೂಪವನ್ನು ಕೆತ್ತುವ ಶಿಲ್ಪಿಯಾದೆ ನೀನು 


ಆಗಸದಷ್ಟು ಅಗಲದ ನಿನ್ನ ಕಣ್ಣಲ್ಲಿ ಕೊಂಚವೇ 

ಮಿಂಚು ಕಂಡರೂ ಸಾಕು ಮಿಡಿಯುವುದು ನನ್ನ ಹೃದಯ 


ಹಕ್ಕಿಗಳಂತೆ ನನಗೂ ರೆಕ್ಕೆಗಳು ಇದ್ದಿದ್ದರೆ ಎಷ್ಟು ಚಂದ 

ಆಗ ಹಾರಾಡುತಿದ್ದೆ ಸದಾ ನಿನ್ನ ಮನಸೆಂಬ ಮೋಡದ ತುಂಬಾ 


ಸೂರ್ಯನ ಬೆಳಕಂತೆ ನಿನ್ನ ಒಲವಿನ ಕಿರಣಗಳು 

ಈ ಮನಸಲಿ ಬಿದ್ದರೆ ಕಂಗೊಳಿಸುವುದು ನನ್ನ ಹೃದಯವೆಂಬ ಧರೆಯು 


ನೀ ಶಿಲ್ಪಿಯಾದರೂ ಮಿಂಚಾದರೂ ಸೂರ್ಯನಾದರೂ 

ಏನೇ ಆದರೂ ಸದಾ ನಾನೇ ನಿನ್ನ ಸಹಚಾರಿಣಿಯಾಗಿರುವೆ

Monday, 13 May 2013

ಸ್ವೀಕಾರ


ನನಗಾಗಿ ಯಾರಿಲ್ಲ ಯಾರಿಗಾಗಿಯೂ ನಾನಿಲ್ಲ 
ನನಗೆ ನಾನೇ ಎಲ್ಲ ನಿನಗೆ ನೀನೆ ಎಲ್ಲ 
ಹೀಗಂದೆ ಬದುಕುವುದು  ಸರಿಯಲ್ಲ 

ಪ್ರೀತಿಯೋ ಸ್ನೇಹವೋ ಕೋಪವೋ ದ್ವೇಷವೋ 
ಏನಾದರಿಲಿ ಹೇಗಾದಿರಲಿ ಯಾರಿಗೂ ಯಾರಿಲ್ಲ 
ಎಂದುಕೊಳ್ಳಬೇಡ  ಅವರಿಗೆ ಅವರೇ ಎಲ್ಲ 

ಕವಿತೆಯೋ ಕವನವೋ ಕಥನವೋ ಅದಕ್ಕೆ 
ಕಲ್ಪನೆ ಭಾವನೆಯೇ ಎಲ್ಲ ಅದಕೆ ಒಳ್ಳೆಯ 
ಮನಸಿನ ಹೊರತು ಬೇರೇನೂ ಬೇಕಿಲ್ಲ 

ರಾಗವೋ ತಾಳವೋ ಭಾವವೋ ಅದಕ್ಕೆ 
ಆಲಿಸುವ ಶ್ರವಣಗಳೇ  ಎಲ್ಲ ಸಂಗೀತದ 
ಸ್ವರಗಳ  ಸಂಚಲನದ ಹೊರತು ಬೇರೇನೂ ಬೇಕಿಲ್ಲ 

ಇವುಗಳ ನಡುವೆ ಬದುಕುವ ಮನುಜರು ನಾವು 
ನಿಸರ್ಗದ ನಿಯಮಗಳ ಮೀರುವ ಹಾಗಿಲ್ಲ 
ಇರುವುದನ್ನು ಸ್ವೀಕರಿಸದ ಹೊರತು ಬೇರೆ ದಾರಿ ಇಲ್ಲ 

Thursday, 9 May 2013

ಭಾವನೆಯ ಚಿತ್ತಾರ


ನೀಲಿ ಆಕಾಶದಲಿ ಚಂದ ಚಂದ 
ಬೆಳ್ಳಿ ಮೋಡಗಳ ಚಿತ್ತಾರ 
ಖಾಲಿ ಮನಸಿನಲಿ ಬಣ್ಣ 
ಬಣ್ಣದ ಭಾವನೆಗಳ ಹಾರ 

ಕವಲೊಡೆದು ಹೋದವು 
ಆ ಮೋಡಗಳು ಎಲ್ಲೋ 
ಕರಗದೆ ಹೃದಯದಲಿ ನೆಲೆಸಿವೆ 
ಭಾವನೆಗಳು ಇಲ್ಲೇ 

ಮೋಡಗಳಷ್ಟು ಹಗುರಲ್ಲ ಭಾವನೆಗಳು 
ಗಾಳಿಗೆ ತೇಲಿ ಹೋಗಲು 
ಆಕಾಶದಂತೆ ಸುಂದರ ಶಾಶ್ವತ 
ಅವು ಎಂದೂ ದೂರಾಗಲಾರವು  

ನೀನೊಂದು ಕವಿತೆಯಂತೆ 
ಎಷ್ಟು ಬರೆದರೂ ಸಾಲದು ನಿನ್ನ ಬಗ್ಗೆ 
ಕಡಲ ಆಳದ ಒಳಗೆ ಇರುವ 
ಮುತ್ತಿಗೆ ಚಿಪ್ಪಿನ ಕಾವಲಿನಂತೆ 
ನಿನ್ನ ಪ್ರತಿ ಹೆಜ್ಜೆಗೂ ನೆರಳಾಗಿ ನಾನಿರುವೆ 
ಮುಗಿಲಿನ ಮೋಡಕ್ಕೆ ಕೈ ಚಾಚಿದರೆ 
ನಿನ್ನ ಪ್ರೀತಿಯ ಮಳೆಯೇ ಸುರಿಯುತ್ತದೆ 
ಎಲ್ಲಿದ್ದರೂ ಹೇಗಿದ್ದರೂ ಬಂದು ಬಿಡು ನೀ ಬೇಗ 
ಬಾನಿನ ಅಂಚಿಂದ ನೀ ಬರುತಿರುವ 
ಕ್ಷಣವ ಒಮ್ಮೆ ನೋಡುವ ಮಹದಾಸೆ ನನ್ನದು 
ಈ ಆಸೆಯ ಬೇಗನೆ ಪೂರೈಸುವ ಕರ್ತವ್ಯ ನಿನ್ನದು 



Friday, 3 May 2013

ಏಕೆ


ನೀ ಯಾರೋ ನಾ ಯಾರೋ 
ಎಲ್ಲಿಂದಲೋ ನೀ ಬಂದೆ ಹೊಸ ಭಾವ ತರಿಸಿದೆ 

ನಿನ್ನ ನೆನೆದು ಗೀಚಿದ ಪದಗಳೆಲ್ಲ 
ಹಾಡಿನಂತೆ ಹರಿಯುವುದೇಕೆ...??? 

ನಿನ್ನ ಕಂಡ ಕ್ಷಣಗಳೆಲ್ಲ 
ನನ್ನ ಮುಖ ತಾರೆಗಳಂತೆ ಮಿನುಗುವುದೇಕೆ...?? 

ನೀ ದೂರಾದ ಕ್ಷಣ ನನ್ನ 
ಕಣ್ಣಲ್ಲಿ ಕಂಬನಿ ಮಿಡಿಯುವುದೇಕೆ...???

ನೀ ಎದುರಿಗೆ ಬಂದಾಗ ನೂರಾರು ಮಾತುಗಳು 
ಹೊರಬರದೆ ಮೌನವಾಗುವುದೇಕೆ...???

ಈ ಏಕೆ ಅನ್ನುವ ಪ್ರಶ್ನೆಗಳಿಗೆ ಉತ್ತರ ಸಿಗದೇ 
ಸದಾ ಕಾಲ ನನ್ನ ಕಾಡುತ್ತಿದೆ ಹೀಗೇಕೆ...??

Thursday, 2 May 2013

ಕಪ್ಪು ಬಿಳುಪಿನ ಸಂಗಮ

ನಿನಗೆಂದೇ ನಾ ಗೀಚುತಿರುವೆ 
ಖಾಲಿ ಹಾಳೆಯಲಿ ಏನೇನೋ ಅಕ್ಷರಗಳ 

ಅದಕ್ಕೇನೆಂದು ನೀ ಕರೆಯುವೆ
ಕವಿತೆಯೋ ಕಾದಂಬರಿಯೋ ಕವನವೋ

ಬರೆದು ಬರೆದು ಬರಿದಾಯಿತು ಬಿಳಿಯ ಕಾಗದ
ಅಕ್ಷರಗಳ ಸೋರಿಸಿ ಖಾಲಿ ಆಯಿತು ಕಪ್ಪು ಶಾಹಿ

ಕಪ್ಪು ಬಿಳುಪಿನ ಸಂಗಮವಾಗಿ ಹರಿಯುತಿದೆ
ಈಗ ಬಣ್ಣ ಬಣ್ಣದ ಚಂದದ ಭಾವನೆಗಳು

ಆ ಭಾವನೆಯು ಕಾಯುತಿದೆ ಒಂದು ಪ್ರತಿಸ್ಪಂದನವ
ಅದು ಸಿಗುವವರೆಗೂ ನಾ ಗೀಚುವೆ ಪ್ರೇಮಪತ್ರವ