Monday, 18 March 2013

ಒಲವಿನ ಭಾವ


ನಿನ್ನೊಲವ ಬಯಸಿ ನಾ ಬಂದೆ ನಿನ್ನ ಹಿಂದೆ 
ಇದನರಿತು ನೀ ಬಂದು  ನಿಂತೇ ನನ್ನ ಮುಂದೆ 

ನಿನ್ನ ನೋಡಿದ ಖುಷಿಯಲ್ಲಿ  ತಡೆಯದೆ 
ಬಂತು  ಕಣ್ಣೀರ ಬಿಂದು ಒಂದು 
ಅದನು ಜಾರದೆ ಕೈಯಲ್ಲೇ ಹಿಡಿದೇ ನೀ ಅಂದು 
ಏನು ಪ್ರೀತಿಯೋ ಕಾಳಜಿಯೋ  ನಿನ್ನದು 

ನಿನ್ನ ಈ ಪ್ರೇಮದ ಕಾರಂಜಿಯಲಿ 
ದಿನವೂ ನೆನೆಯುವಾಸೆ ನನಗೆ 
ನಿನ್ನ ಈ ಒಲವಿನ ಬಂಧನದಿಂದ 
ಎಂದಿಗೂ ಬಿಡುಗಡೆ ಬೇಡೆನಗೆ 

ಅಂದು ಬಂದ ಕಣ್ಣೀರ  ಬಿಂದುವ ನೀ ಹಿಡಿದು 
ಆನಂದ ಭಾಷ್ಪವ ಹರಿಸುವಂತೆ ಮಾಡಿದೆ 
ಈ ಜಗದಲ್ಲಿ ಬೇರೇನೂ ಬಯಸೆನು ನಾನು 
ನಿನ್ನ ಒಲವಿನ ಬಾಹುಬಂಧನವೇ ಸಾಕಿನ್ನು  

Thursday, 14 March 2013


ಹಕ್ಕಿಯಂತೆ ಹಾರಾಡುವುದು ಈ  ಮನಸು 
ಪ್ರತಿಕ್ಷಣವೂ ಕಾಣುವುದು  ಸುಂದರ ಕನಸು 
ಅದು ಮಾಡಿಕೊಳ್ಳುವುದಿಲ್ಲ ಯಾರಮೇಲೂ ಮುನಿಸು 
ಈ ಮನಸು ಯಾವಾಗಲೂ ಹೇಳುವುದು ಎಲ್ಲರನ್ನು ನಗಿಸು 

Wednesday, 13 March 2013

ಅಮ್ಮ


ನಗುವ ಕಂದನ ನೋಡಿ ಮರೆವಳು 
ತನ್ನ ನೋವ ಆ ತಾಯಿ 
ತನ್ನ ಮಡಿಲು  ತುಂಬಿದ  ಆ ಮಗುವ 
ಒಡನಾಟವೇ ಆ ತಾಯಿಗೆ ಉಸಿರು 
ಅತ್ತರೂ ನಕ್ಕರೂ ಬಿದ್ದರೂ ಎದ್ದರೂ 
ಕಂದನ ಬಾಯಿಂದ ಬರುವುದು 
ಕೇವಲ ಅಮ್ಮ ಅಮ್ಮ ಅಮ್ಮ 
ಏನು ಬಂಧವೋ ಏನು ಮಮತೆಯೋ 
ಅಮ್ಮ ನಿನ್ನದು ದೇವರಿಗಿಂತ ದೊಡ್ಡ 
ದೇವತೆಯು ನೀನು ನಿನಗಾರು ಸಾಟಿ 
ಓ ಅಮ್ಮ ನಿನ್ನ ಮಮತೆಯ ಮಡಿಲಲ್ಲಿ 
ಸದಾ ಸುಖಿಯಾಗಿರುವುದು ನಿನ್ನ ಕಂದ 

ಸ್ನೇಹದ ಬಂಧನ


ಏನೆಂದು ಬರೆಯಲಿ ನಿನಗಾಗಿ 
ಬರೆದು ಬರೆದು ಪದಗಳೇ ಸವೆದವು 
ಆದರೆ ಹೋಲಿಕೆಯಾಗುತ್ತಿಲ್ಲ  ನಿನ್ನ 
ಸ್ನೇಹಕ್ಕೆ ಯಾವುದೇ ಪದವೂ 

ಪದಗಳ ಹುಡುಕಾಟವೇ ಸಾಗಿದೆ 
ಶಬ್ಧ ಭಂಡಾರದಲ್ಲೇ ಮುಳುಗಿದೆ 
ಏನು ಮಾಡಲಿ ಹೇಗೆ ಹೇಳಲಿ ನಿನ್ನ 
ಸ್ನೇಹದ ಪರಿಯ ಏನೆಂದು ಬರೆಯಲಿ 

ಅಮೃತದಷ್ಟು ಅಮೂಲ್ಯವೆನ್ನಲೇ  
ಪರ್ವತದಷ್ಟು ಎತ್ತರ ಎನ್ನಲೇ 
ಆಕಾಶದ ನಕ್ಷತ್ರಕ್ಕಿಂತ ಹೊಳಪೆನ್ನಲೇ 
ಏನೆಂದು ಹೇಳಲಿ ನಿನ್ನ ಸ್ನೇಹಕೆ 

ತಂದೆ ತಾಯಿಯ ಪ್ರೀತಿಯ 
ಸೋದರತೆಯ ಅನುಬಂಧವ 
ನಲ್ಲ ನಲ್ಲೆಯ ಪ್ರೇಮವ ಮರೆಸುವ 
ಈ ಪವಿತ್ರ  ಸ್ನೇಹವ  ಏನೆಂದು ವರ್ಣಿಸಲಿ  

Tuesday, 12 March 2013

ನಿನ್ನ ನೆನಪು



ಹೀಗೇಕೆ ಮೌನವಾಗಿರುವೆ ಗೆಳೆಯ ಮಾತಿಲ್ಲದೆ 
ಈ ಗೆಳತಿಯ ನೆನಪಿಲ್ಲವೇ

ನಿನ್ನೊಲುಮೆಯ ಕರೆಯ ಕೇಳದೆ 
ನಿನ್ನೊಡನೆ ಮಾತಾಡದೆ ನನ್ನ ಧ್ವನಿ ನನಗೆ ಮರೆತಂತಿದೆ 

ನೀ ಪಿಸುಗುಟ್ಟಿದ ಪ್ರತೀ ಸವಿಮಾತು 
ಸ್ವಾತಿಮುತ್ತಂತೆ ನನ್ನ ಸುತ್ತಲೇ ಸುತ್ತುತ್ತಿದೆ 

ಬೇಡವೆಂದರೂ ಬರುತಿದೆ ನಿನ್ನ ನೆನಪು 
ಬಂದು ಕಾಡುತಿದೆ ಪ್ರತಿಕ್ಷಣವೂ 

ತುಂತುರು ಮಳೆಯಂತೆ ಸವಿಯಬೇಕೆಂದಿರುವೆ 
ನಿನ್ನ ಆ ಚಂದ ನೆನಪುಗಳನು 

ಧಾರಾಕಾರ ಮಳೆಯಲಿ ಕೊಚ್ಚಿಹೋಗುವ ಹಾಗೆ 
ಮಾಡದಿರು ನನ್ನ ಭಾವನೆಯನು 

ಈ ಮೌನವ ತಡೆಯಲು ನನಗಿಲ್ಲ ಶಕ್ತಿ 
ಹೇಗಾದರೂ ಕೊಟ್ಟುಬಿಡು ಈ ವಿರಹದಿಂದ ಮುಕ್ತಿ 






Monday, 4 March 2013

ಏನಿದು ಮಾಯೆ ನಾ ಅರಿಯೇ


ಅವಳಿಲ್ಲದಿದ್ದರೆ ಇವನಿಲ್ಲ  ಇವನಿಲ್ಲದಿದ್ದರೆ ಅವಳಿಲ್ಲ 
ಎನ್ನುತಿರುವರು ಆ ಪ್ರೇಮಿಗಳು 
ಎಲ್ಲ ಇದ್ದರೂ ಏನು ಇಲ್ಲದವರಂತೆ 
ಬಾಳುವರು ಪ್ರೀತಿಯಲ್ಲಿ ಸಿಲುಕಿದ ಪ್ರೇಮಿಗಳು 

ಪ್ರೀತಿ ಕುರುಡೆಂದು ಹೇಳುವರು ದೊಡ್ಡವರು 
ಪ್ರೀತಿಯೇ ದೈವ ಎಂದು ನಂಬುವರು ಈ ಪ್ರೇಮಿಗಳು 

ಒಲವ ಮಳೆಯಲಿ ನೆನೆಯುವ ಮನಸುಗಳಿಗೆ 
ಪ್ರೀತಿಯೇ ಎಲ್ಲ ಹೆತ್ತವರ  ಚಿಂತೆ ಅವರಿಗಿಲ್ಲ 
ಪ್ರೀತಿಗಿಂತ ಜಾತಿ ಕುಲವೇ ದೊಡ್ಡದು ಎನ್ನುವ 
ದೊಡ್ಡವರ ಮನಸುಗಳಿಗೆ ಅವರ ಪ್ರತಿಷ್ಥೆಯೇ 
ಎಲ್ಲ ಮಕ್ಕಳ ಭಾವನೆಯ ಅರಿವು ಅವರಿಗಿಲ್ಲ 

ಪ್ರೀತಿಯು ಮನಗಳ ಬೆಸೆಯುವ ಸವಿಬಂಧವಾಗಬೇಕೇ 
ಹೊರತು ಮನುಷ್ಯರ ಜೀವ ತೆಗೆಯುವ ಆಯುಧವಲ್ಲ 

ಪ್ರೀತಿಯನ್ನು ಪ್ರೀತಿಸುವ ಪ್ರೇಮಿಗಳೇ ಪ್ರೀತಿಸಿ 
ನಿಮ್ಮ ಹೆತ್ತವರನ್ನು ತೊರೆಯದಿರಿ ಯಾರನ್ನು 
ಜಾತಿ ಕುಲವೆಂದು ಹೊಡೆದಾಡುವ ಹೆತ್ತವರೇ ಗೌರವಿಸಿ 
ಮಕ್ಕಳ ಭಾವನೆಯನ್ನು ಕೊಲ್ಲದಿರಿ ಅವರ ಪ್ರೀತಿಯನ್ನು 



Saturday, 2 March 2013

ದೂರಾಗದಿರು ಗೆಳೆಯ


ಕಾಣದ ಪ್ರೀತಿಯ ಹುಡುಕುತ್ತಾ 
ಕಣ್ಣೆದುರೇ ನಿನಗಾಗಿ ಕಾಯುತ್ತಿರುವ 
ಪ್ರೀತಿಯ ಕಳೆಯದಿರು 

ಮುಖ ನೋಡಿ ಹುಟ್ಟಿದ ಪ್ರೀತಿಗಾಗಿ 
ಹೃದಯದಲ್ಲಿ ನಿನಗಾಗಿ ಹುಟ್ಟಿದ 
ಪ್ರೀತಿಯ ಕೊಲ್ಲದಿರು 

ನನ್ನ ಭಾವನೆಗೆ  ಬಣ್ಣವಿಲ್ಲ ಪ್ರೀತಿಗೆ 
ಕಣ್ಣಿಲ್ಲ ಜೊತೆಗೆ ನಿನ್ನನ್ನೇ  ಪ್ರೀತಿಸುವ ನನ್ನ 
ಮನಸಿಗೆ ನಿನ್ನ ಸ್ಪಂದನವಿಲ್ಲ 

ನನ್ನ ಒಲವಿನ ಗೆಳಯನೇ ಏನೆಂದು ಹೇಳಲಿ 
ನಿನ್ನ ಪ್ರೀತಿಯ ಕನಸನ್ನೇ ಕಾಣುವ ನನಗೆ 
ಬೇರೇನೂ ಬೇಕಿಲ್ಲ ನಿನ್ನ ಪ್ರೇಮದ ವಿನಹ 

ನೀ ಓಡುತ್ತಿರುವೆ ನನ್ನಿಂದ ದೂರ 
ತಾಳಲಾಗುತ್ತಿಲ್ಲ ನನ್ನ ಮನಸಿನ ಭಾರ 
ನನ್ನ ಸನಿಹ ಬೇಗನೇ ನೀ ಬಾರ