Saturday, 15 December 2012

ಗೆಳೆಯನ ಅಗಲಿಕೆ

ಮನಸೇಕೋ ಚಡಪಡಿಸುತ್ತಿದೆ ಇನಿಯ 
ನೀನಿಲ್ಲವೆಂದು ನನ್ನ ಸನಿಹ 
ಕಾಣಿಸದೆ ನಿನಗೆ ಈ ಅಗಲಿಕೆಯ ನೋವ 
ತಡೆಯಲಾಗುತ್ತಿಲ್ಲ ನನಗೆ ಈ ಮನಸಿನ ಭಾರ 

ಇನ್ನೆಷ್ಟು ದಿನ ಕಾಯಲಿ ನಿನಗೆ ನಾನು 
ನಿನ್ನನ್ನು ಕನವರಿಸುತ್ತಲೇ ಜೀವನ ಸವಿಸಲೇ ನಾನು 
ಮಾತಿಲ್ಲದೆ ಮೌನವಾದರೆ ನನ್ನ ಕಂಬನಿ ನಿಲ್ಲುವುದೇ 
ಹೀಗೇಕೆ ಕೊಲ್ಲುತಿರುವೆ ನೀ ನನ್ನ 

ಭಾವನೆಗಳ ಲೋಕದಲ್ಲೇ ಬದುಕುತಿರುವೆ ನಾನು 
ನಿನ್ನ ಪ್ರತಿಸ್ಪಂದನವನ್ನು ಕಾಯುತ್ತ 
ಆದರೆ ಈ ನಿನ್ನ ಮೌನವನ್ನು ಹೇಗೆ ಸಹಿಸಲಿ 
ನಿನ್ನ ಹೃದಯಕ್ಕೆ ಅರ್ಥವಾಗುತ್ತಿಲ್ಲವೇ ನನ್ನ ವೇದನೆ 

ಬರಿದಾದ ನನ್ನ ಬಾಳಲೀ ಪ್ರೀತಿಯ ಸುಖವನ್ನು 
ನೀನೇಕೆ ತಂದೆ ಆ ಪ್ರೀತಿಯ ಆನಂದವನ್ನು ಅನುಭವಿಸುವ 
ವೇಳೆಗೆ ನೀನೇಕೆ ಮತ್ತೆ ನನ್ನಿಂದ ದೂರವಾಗುತ್ತಿರುವೆ 
ನನ್ನ ಭಾವನೆಗಳಿಗೆ ನಿನ್ನಲ್ಲಿ ಬೆಲೆಯೇ ಇಲ್ಲವೇ 

ನೀನಿಲ್ಲದ ನನ್ನ ಬಾಳು ಕಲ್ಪನೆಗೂ ಎಟುಕದು 
ಆಗದು ಗೆಳೆಯ ನೀನಿರದೇ  ನಾನು ಬಾಳಲು 
ಈಗಲೇ ನೆನಪಿಸಿಕೊ ನನ್ನ 
ನಾನು ಮಣ್ಣಲ್ಲಿ ಮಣ್ಣಾಗುವ ಮುನ್ನ 



Saturday, 8 December 2012

ಪ್ರೇಮದ ಹಾತೊರಿಕೆ

ನೀ ನಡೆವ ಹಾದಿಯ ಹೂವಿಂದ ಅಲಂಕರಿಸಿ 
ನೀ ನುಡಿವ ನುಡಿಯನ್ನು ಮುತ್ತಿಂದ ಪೋಣಿಸಿ 
ನಿನ್ನೊಲುಮೆಯ ಪ್ರೀತಿಗೆ ಭಾವಗಳ ಬಣ್ಣ ತುಂಬಿ 

ನಿನ್ನೊಡಲ ಉಸಿರಾಗಿ ಪ್ರೆಮಗಂಗೆಯನು ಹರಿಸುವೆ

ಕಂಡ ಕನಸನ್ನು ಬೆನ್ನಟ್ಟಿ ಹೋಗುವ ಬದಲು
ಕನ್ನಡಿಯ ಮುಂದೆ ನಿಂತು ಕಲ್ಪನೆಯಲ್ಲೇ ಮೈಮರೆತು
ನಿಂತ ನನ್ನ ಭಾವನೆಗಳಿಗೆ ಜೀವ ತುಂಬಿದೆ ನೀನು
ಮನಸಾರೆ ನಿಷ್ಕಲ್ಮಷವಾಗಿ ಪ್ರೀತಿಸುವೆ ನಿನ್ನ ನಾನು

ನಿನ್ನ ಒಲವ ಸವಿನೆನಪಲ್ಲಿ ಸವಿ ಸ್ವಪ್ನವ ಕಾಣುತ್ತ
ಕವಿತೆಗಳ ಗೀಚುತ್ತ ಪ್ರತಿ ದಿನ ಪ್ರತಿ ಕ್ಷಣ
ಇಂಪಾದ ಪ್ರೇಮ ನಾದವ ಹರಿಸುತಿರುವೆ
ನಿನ್ನ ಎದುರು ನೋಡುತ್ತಾ ಓ ಗೆಳೆಯ....

Monday, 3 December 2012

ಏನು ಉಡುಗೊರೆ ಕೊಡಲಿ ನಾ ನಿನಗೆ....??



ನಿನ್ನಯ ಒಲವಿಗೆ ಉಡುಗೊರೆಯಾಗಿ
ನಾನೇನು ಕೊಡಲಿ ಗೆಳೆಯ
ನನ್ನ ನೋವಿನ ಕಣ್ಣೀರನ್ನು
ನಿನ್ನ ಪ್ರೀತಿಯ ಪನ್ನೀರಲ್ಲಿ ತೇಲಿಸಿದೆ

ಕಲ್ಲಂತೆ ಇದ್ದ ನನ್ನ ಮನಸಲ್ಲಿ
ಭಾವನೆಗಳ ಜೊತೆಯಲ್ಲಿ ಕನಸನ್ನು
ತುಂಬಿ ನಿನ್ನ ಪ್ರೇಮದ ಕಾರಂಜಿಯಲ್ಲಿ
ನನ್ನ ನೆನೆಯುವಂತೆ ಮಾಡಿದೆ

ನಿನ್ನ ಪ್ರೀತಿಯ ಅಪ್ಪುಗೆಯ
ಬಂಧನದಿಂದ ನನ್ನ ಬಂಧಿಸಿ
ನಿನ್ನ ಕರಗಳಿಂದ ನನ್ನ ಕಣ್ಣೀರನ್ನು
ಕರಗಿಸಿ ಪ್ರೀತಿಯ ಮುತ್ತನ್ನು ಹರಿಸಿದೆ

ನಿನ್ನ ಪ್ರೀತಿಯ ಪರಿಯ ಏನೆಂದು
ಬಣ್ಣಿಸಲಿ ನಾನು ಪದಗಳೇ ಸಾಲದಾಗಿದೆ
ನನಗೇನು ತೋಚದೆ ಈ ಕವನವನ್ನೇ
ಉಡುಗೊರೆಯಾಗಿ ನೀಡುತಿರುವೆ

ನೂರಾರು ಬಣ್ಣದ ಕನಸನ್ನು ಒಂದೇ
ಕವಿತೆಯಲಿ ಹೇಳಲು ಸಾದ್ಯವೇ
ನಿನ್ನ ಒಲವಿನ ಧಾರೆಗೆ ಕವಿತೆಯಾಗಿ
ನಾನು ಹರಿದಿರುವೆ ಸ್ವೀಕರಿಸು ಗೆಳೆಯ

Saturday, 17 November 2012

ಕೂಡು ಅಗಲುವಿಕೆಯ ಅನುಬಂಧ

ನೀ ನನ್ನ ಬಳಿ ಇದ್ದರೆ 
ಬಾಗಿಲಿಗೆ ಬೆಸೆದ ಹೊಸ್ತಿಲು 
ತೋರಣಕ್ಕೆ ಅಂದ ಕೊಡುವ ಹಸಿರು 
ಕಣ್ಣಿಗೆ ಕಾವಲಿರುವ  ರೆಪ್ಪೆ 
ಒಡಲಿಗೆ ಜೀವ ತುಂಬುವ ಉಸಿಉ 
ಕಡಲಿಗೆ ಹಿತ ನೀಡುವ ತೀರ ಇದ್ದಂತೆ 

ನೀ ನನ್ನ ಬಳಿ  ಇಲ್ಲದಿದ್ದರೆ 
ಕರಗುವ ಮಂಜಿನ ಹನಿ 
ಬಿಸಿಲಲಿ ಬದುವ ಸುಮ 
ನೆರಲನೆ ಕಾಣದ ಲತೆ 
ಜೇನಿನಿಂದ  ದೂರಾದ ಹೂವು 
ಸಿಡಿಲಿನ ಆರ್ಭಟಕ್ಕೆ ಬೆಚ್ಚುವ 
ಮರ ಇದ್ದಂತೆ 

ಅದಕ್ಕಾಗಿಯೇ ನಾನು 
ನನ್ನ ಮನಸೆಂಬ ಕನ್ನಡಿಯಲ್ಲಿ 
ನಿನ್ನ ಪ್ರತಿಬಿಂಬ ಶಾಶ್ವತವಾಗಿ 
ನೆಲಸಲಿ ಎಂದು ಬಯಸುವೆ 
ನೀ ನನ್ನ ಮರೆಯದಿರು 
ಓ ನನ್ನ ಜೀವದ ಉಸಿರೇ 

ಆಸರೆ

ಮನಸಿನ ಆಳದ ನೋವಿಗೆ 
ಪ್ರೀತಿಯೆಂಬ ತೈಲವೇ ಆಸರೆ 
ನೆನಪಿನ ದೋಣಿಯನ್ನು ನಡೆಸಲು 
ಸ್ನೇಹ ಎಂಬ ನಾವಿಕನೆ ಆಸರೆ 

ಹೊತ್ತಿ ಉರಿಯುವ ಕಾಡ್ಗಿಚ್ಚಿಗೆ 
ವರುಣ ದೇವನ ಕೃಪೆಯೇ ಆಸರೆ 
ಭವಿಷ್ಯದ ಕನಸುಗಳಿಗೆ 
ವಾಸ್ತವದ ಪರಿಶ್ರಮವೇ ಆಸರೆ 

ನಕ್ಷತ್ರಗಳಿಗೆ ಆಕಾಶವೇ ಆಸರೆ 
ಭೂಮಿಗೆ ಇರುಳಲಿ ಬೀಳುವ ಚಂದ್ರನ ಬೆಳಕೇ  ಆಸರೆ 
ಆದರೆ ಶಶಿಯೇ ನನಗೆ ನಿನ್ನ 
ಬೆಳದಿಂಗಳೇ ಆಸರೆ 

ಮುಗಿಲ ಕಾರ್ಮೋಡ ಕರಗಳು 
ಸೂರ್ಯನ ಕಿರಣಗಳೇ ಆಸರೆ 
ನನ್ನ ಮನದ ದುಗುಡ ತಿಳಿಯಾಗಲು 
ನಿನ್ನ ಒಲವಿನ ಮಾತುಗಳೇ ಆಸರೆ 

ನೀಹಾರಿಕ

ಕನಸಲಿ ಕಂಡ ನೀಹಾರಿಕೆಯ ಬಿಂಬ 
ಹುಡುಗನ ಮನಸಲಿ ಬೇರೂರಿದೆ 
ಯಾವಾಗ ಕನುವಲೋ ಎಂಬ 
ಹತೊರಿಕೆ ಅವನಿಗೆ 

ಆಕಾಶದಲ್ಲಿ ಕಂಡ ನಕ್ಷತ್ರಗಳ
ಗುಚ್ಛ ಭೂಮಿಯಿಂದ ನೋಡಿದ 
ನೀಹಾರಿಕೆಗೆ ಅವುಗಳನ್ನು 
ಎನಿಸುವ ಹಾತೊರಿಕೆ 

ಪ್ರತಿದಿನ ಆ ಒಂದೊಂದು ನಕ್ಷತ್ರಕ್ಕೆ 
ಅವನ  ಕಥೆ ಹೇಳಿ ಮಲಗುವ ಆಸೆ ಅವಳಿಗೆ 
ದಿನಕ್ಕೊಂದು ನಕ್ಷತ್ರಕ್ಕೆ ಬದುಕಿನ 
ಕೊನೆತನಕ ಕಥೆ ಹೇಳುವ ಹಾತೊರಿಕೆ 

ನೀಹಾರಿಕೆ ಇಲ್ಲವಾದ ಒಂದು ದಿನ 
ಆಕಾಶದ ಅಷ್ಟು ನಕ್ಷತ್ರಗಳು 
ಜಗತ್ತಿಗೆ ಅವರಿಬ್ಬರ ಕಥೆ ಹೇಳಲಿ 
ಎಂಬುದು ಅವಳ ಹಾತೊರಿಕೆ 

Friday, 2 November 2012

ಬಾ ಮಳೆಯೇ ಬಾ

ಬಾ ಮಳೆಯೇ ಬಾ
ಉರಿವ ಈ ಧರೆಯ 
ತಂಪಾಗಿಸಲು ಬಾ

ಈ ಭೂಮಿಯಲ್ಲೇ ಬದುಕಿ 
ಈ ಭೂಮಿಯನ್ನು ಅಗಿದು 
ಈ ಭೂಮಿಯೊಳಗೆ ಹುಗಿದು 
ಮುಗಿಸುವ ಮನುಷ್ಯನ ಬದುಕಿಗೆ 
ನಿನ್ನಾಸರೆಯೇ ಉಸಿರು ಓ ಮಳೆಯೇ

ನಿನ್ನಿಂದಲೇ ನಾವು ನೀನಿದ್ದರೆ ನಮ್ಮ ಬದುಕು
ನೀ ಮುನಿದರೆ ನಮಗೆ ಕೆಡುಕು
ಸುರಿದರೆ ಮಳೆ ನಗುವುದು ಈ ಧರೆ
ಮುನಿದರೆ ಮಳೆ ಬಿರಿಯುವುದು ಈ ಧರೆ 

ಓ ಮಳೆಯೇ ಇರಲಿ ನಿನಗೆ 
ಭೂಮಿಯ ಮೇಲೆ ಪ್ರೀತಿ
ನೀನಿದ್ದರೆ ನಮ್ಮ ಬಾಳು ನಿರ್ಭೀತಿ
ಬಾ ಮಳೆಯೇ ಬಾ 

ನೀನು ಮಿತವಾಗಿ ಸುರಿದರೆ 
ಹಿತವಾಗುವುದು ಈ ಇಳೆಗೆ
ಈ ಭೂಮಿಗೆ ಜೀವವು ನೀನೆ ಜೀವನವು ನೀನೆ
ಬಾ ಮಳೆಯೇ ಬಾ 

ನಿನ್ನ ರೌದ್ರನರ್ತನವನ್ನು ತೋರಿಸದೆ 
ಬರಿಯ ಹನಿಗಳನ್ನು ಸುರಿಸದೆ ಇರಬೇಡ 
ಮಿತವಾಗಿ ಸುರಿದು ಹಿತವಾಗಿ ಇರಿಸು ಈ ಭೂಮಿಯ
ಬಾ ಮಳೆಯೇ ಬಾ